ಗೋವಿನ ಹಾಲುಂಡ ನಮ್ಮ ಮೇಲೆ ಗೋಸಂರಕ್ಷಣೆಯ ಹೊಣೆಗಾರಿಕೆ

cow

ಹೆತ್ತ ತಾಯಿಯ ಎದೆಹಾಲಿನ ಮಾನವ ಬದುಕಿನ ಉದ್ದಕ್ಕೂ ಹಾಲುಣಿಸುವ ಗೋಮಾತೆಯೆ ನಮ್ಮ ನಿತ್ಯಸಂಗಾತಿ, ಅನಾದಿ ಕಾಲದಿಂದಲೂ ಮಾನವನು ಗೋವುಗಳೊಡನೆ ಸಹಬಾಳ್ವೆ ನಡೆಸಿದ್ದಾನೆ ಮಾತ್ರವಲ್ಲದೇ ಗೋವಿನಿಂದ ಪಡೆಯುವ ಉತ್ಪನ್ನ, ಉಪಯೋಗಳನ್ನು ಮನಗಂಡು ಗೋವಿಗೆ ಪೂಜ್ಯನೀಯ ಸ್ಥಾನ ನೀಡಿದ್ದಾನೆ. ಆದರೆ ಇಂದು ನಗರೀಕರಣದ ಪರಿಣಾಮವಾಗಿ ಲಕ್ಷ- ಲಕ್ಷ ಗೋವುಗಳು ಕಾಸಾಯಿಕಾನೆಯನ್ನು ಸೇರುತ್ತಿವೆ. ದುರಂತವೆಂದರೆ ಗೋವಿನ ಹಾಲು ಉತ್ಪನ್ನಗಳನ್ನು ಸವಿಯುವ ನಾವು ನಮ್ಮ ತಾಯಿಯಂತಹ ಗೋವಿನ ಸಂರಕ್ಷಣೆ ಮತ್ತು ಸಂವರ್ಧನೆಯ ಬಗ್ಗೆ ಎಷ್ಟು ಜಾಗೃತರಾಗಿದ್ದೇವೆ?

ಗ್ರಾಮವಿಕಾಸ ಮತ್ತು ಗೋಸಂರಕ್ಷಣೆಯ ಬಗ್ಗೆ ಜನ ಮಾನಸದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾನ್ಯ ಸೀತಾರಾಮ ಕೆದಿಲಾಯರು ನಡೆಸುತ್ತಿರುವ ಭಾರತ ಪರಿಕ್ರಮ ಯಾತ್ರೆ ಮಂಗಳೂರಿಗೆ ಬಂದಾಗ ನಾನು ಯಾತ್ರೆಯಲ್ಲಿ ಪಾಲ್ಗೊಡಿದ್ದೆ. ಅವರು ಪ್ರಚುರಪಡಿಸಿದ ಗೋಸಂರಕ್ಷಣೆಯ ವಿಷಯ ಬಾಲ್ಯದಿಂದಲು ಗೋವಿನ ಬಗ್ಗೆ ಆಸಕ್ತಿ ಇದ್ದ ನನಗೆ ಹೊಸ ದೃಷ್ಟಿ ನೀಡಿತು. ಗೋಸಂರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕೆಂದು ಸಂಕಲ್ಪಮಾಡಿದೆ, ಆದರೆ ಹೇಗೆ?

ಮಂಗಳೂರಿನಂತಹ ನಗರದಲ್ಲಿ ಮನೆಯಲ್ಲಿ ಗೋವುವನ್ನು ಸಾಕುವುದು ಕಷ್ಟಸಾಧ್ಯ ಹಾಗಾಗಿ ಈಗಾಗಲೆ ಇರುವ ಗೋಶಾಲೆಯಲ್ಲಿ ನನ್ನನು ನಾನು ತೊಡಗಿಸಿಕೊಳ್ಳಲು ನಿಶ್ಚಯಿಸಿ ಸ್ನೇಹಿತರಿಂದ ಗೋಶಾಲೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾಗ ನನಗೆ ಹತ್ತಿರವಾಗಿ ಕಂಡಿದ್ದೇ ಮಂಗಳೂರು ಮಹಾನಗರದಿಂದ 22 ಕಿ.ಮೀ. ದೂರದ ಮಂಗಳ ಗಂಗೋತ್ರಿ ಸಮೀಪದ ಪಜೀರು ಎಂಬಲ್ಲಿರುವ “ಗೋವನಿತಾಶ್ರಯ ಟ್ರಸ್ಟ್ (ರಿ.)”

2002ರಲ್ಲಿ “ವಿಶ್ವ ಹಿಂದು ಪರಿಷತ್”ನ ಪ್ರಕಲ್ಪವಾಗಿ ರೂಪುಗೊಂಡ ಈ ಸಂಸ್ಥೆ  10 ಎಕ್ರೆಯ ಸುಂದರ ವಿಶಾಲ ಪ್ರದೇಶದಲ್ಲಿ ಕಪಿಲ, ಆಮೃತ ಹಾಗೂ ಗಂಗಾ ಎಂಬ ಮೂರು ಗೋಶಾಲೆಗಳು ರಚಿಸಲ್ಪಟ್ಟಿವೆ. ಇದರಲ್ಲಿ 250ಕ್ಕೂ ಮಿಕ್ಕಿ ಗೋವುಗಳು ಆಶ್ರಯ ಹೊಂದಿವೆ. ತಮ್ಮ ನೆತ್ತಿಯ ನೇರಕ್ಕೆ ಬೀಸಿದ ಕಟುಕರ ಕತ್ತಿಯಿಂದ ಬದುಕಿ ಬಂದ ಬಡಪಾಯಿ ಮೂಕಪಶುಗಳಿವು. ಯಾರಿಗೂ ಉಪದ್ರವ ಮಾಡದೆ, ಹುಲ್ಲು, ಹಸಿರು ಮೇವು ತಿಂದು ನೀರು ಕುಡಿದು ಅಮೃತ ಸಮಾನ ಹಾಲು ನೀಡುವಂತಹುಗಳು ಗೋವುಗಳು. ಆದರೆ ತನ್ನ ದುರಾಸೆಗೆ ಇವುಗಳ ಪ್ರಾಣವನ್ನೇ ಹಿರುವ ಮಾನವನ ಕ್ರೌರ್ಯತೆಗೆ ಸೇವೆಯ ಸಾತ್ವಿಕತೆ ಒಡ್ದುವ ತೆರದಲ್ಲಿ ಈ “ಗೋವಾನಿತಾಶ್ರಮ ಟ್ರಸ್ಟ್” ತಲೆಯೆತ್ತಿ ನಿಂತಿದೆ. ಅದೇ ರೀತಿ ಇಲ್ಲಿನ ‘ಮಮತ’ ಹೆಸರಿನ ಮಹಿಳಾ ಪುನರ್ವಸತಿ ಕೇಂದ್ರ ಅಶಕ್ತ ಮಹಿಳೆಯರ ಪಾಲಿಗೆ ಭಾಗ್ಯ ಸಂಜೀವಿನಿಯೆನಿಸಿದೆ. ಹತ್ತು ಎಕ್ರೆ ನಿವೇಶನದಲ್ಲಿ ತಲೆಯೆತ್ತಿರುವ ಈ ನಂದಗೋಕುಲದಲ್ಲಿ ಒಂದು ಸುಂದರ ಗೋಪಾಲಕೃಷ್ಣನ ಮಂದಿರವು ನಿರ್ಮಿತಗೊಂಡಿದೆ ಇದರ ಸುತ್ತಲ ಪರಿಸರದಲ್ಲಿ ಹಸಿರು ತೆಂಗಿನತೋಟ ಸಾವಯವ ಕೃಷಿಯು ಇದೆ. ಎರೆಹುಳುಗೊಬ್ಬರ, ಹಟ್ಟಿಗೊಬ್ಬರ, ಗೋಮೂತ್ರ ಸಂಬಂಧಿ ಔಷಧವನ್ನು ಸಂಸ್ಥೆ ಒದಗಿಸುತ್ತಿದೆ. ಕೇಂದ್ರ ಪ್ರಾಣಿ ಅಭಿವೃದ್ಧಿಗೆ ಸಂಯೋಜಿತವಾದ, ಆದಾಯ ತೆರಿಗೆ ವಿನಾಯಿತಿ ಹೊಂದಿದ, ವಿದೇಶದಿಂದಲೂ ದೇಣಿಗೆ ಪಡೆಯಲು ಅಧಿಕೃತ ಸಂಸ್ಥೆ “ಗೋವನಿತಾಶ್ರಯ ಟ್ರಸ್ಟ್ (ರಿ.)”

ಕಳೆದ ಹನ್ನೆರಡು ವರ್ಷಗಳಲ್ಲಿ ದನಕರುಗಳ ಸಂಖ್ಯೆ ದಿನೇ ದಿನೇ ವೃದ್ಧಿಯಾಗುತ್ತಲೇ ಇದೆ. ಪ್ರಾರಂಭದ ದಿನಗಳಲ್ಲಿ 30-40ರ ಸಂಖ್ಯೆಯಲ್ಲಿದ್ದ ಪಶುಗಳ ಸಂಖ್ಯೆ ಇಂದು 250ರ ಗಡಿಯನ್ನು ದಾಟಿ ನಿಂತಿದೆ. ಇಲ್ಲಿರುವ ಗೋವುಗಳಲ್ಲಿ 75% ಹೋರಿಗಳುಹಾಗಾಗಿ ಖರ್ಚು ವೆಚ್ಚಗಳೂ ಈ ಪಶುಸಂಗೋಪನೆ ಬಗೆಗೆ ಅಪಾರವೆನಿಸಿದೆ.

ಸಾಧಾರಣಾ ದಿನವೊಂದಕ್ಕೆ ಸರಾಸರಿ 10,000ರೂಪಾಯಿ ವೆಚ್ಚ ಈ ಸಂಸ್ಥೆಯನ್ನು ನಡೆಸುವಲ್ಲಿ ತಗಲುತ್ತದೆ. ಆದರೆ ದೈನಂದಿನ ಆದಾಯ ಇನ್ನೂ 2,000ರೂ.ಗಳ ಗಡಿ ದಾಟುತ್ತಿಲ್ಲ. ಹಾಗಾಗಿ ಖರ್ಚು ವೆಚ್ಚಗಳ ಲೆಕ್ಕಾಚಾರದಲ್ಲಿ ರೂ. 8,000ದಷ್ಟು ಪ್ರತಿನಿತ್ಯ ನಷ್ಟ ಭರಿಸಿಯೇ ಈ ಸಂಸ್ಥೆ ನಡೆಯುತ್ತಿದೆ. ಆದರೂ ಇದೊಂದು ಗೋಸಂರಕ್ಷಣೆಯ ಪವಿತ್ರ ಕಾರ್ಯ, ಅಶಕ್ತ ಮಹಿಳೆಯರ ಆಶ್ರಯ ತಾಣ ಎನ್ನುವ ಸೇವಾ ಮನೋಭೂಮಿಕೆಯಿಂದ ಲಾಭ-ನಷ್ಟಗಳ ಪರಿವೇ ಇಲ್ಲದೆ ಸಂಸ್ಥೆ ನಡೆಯುತ್ತಿದೆ.

ಒಂದೆಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಗೋವಿನಿಂದ ಪ್ರಯೋಜನ ಪಡೆದವರೆ, ಗೋವಿನ ಹಾಲುಂಡ ನಮ್ಮ ಮೇಲೆ ಗೋಸಂರಕ್ಷಣೆಯ ಹೊಣೆಗಾರಿಕೆ ಇಲ್ಲವೆ?
ಮನೆಯಲ್ಲಿ ಗೋವನ್ನು ಸಾಕಲು ಸಾಧ್ಯವಿಲ್ಲದಿದ್ದರೂ ಗೋವನಿತಾಶ್ರಯ ಟ್ರಸ್ಟ್ ನಂತಹ ಗೋಶಾಲೆಗಳಲ್ಲಿ ಸಕ್ರಿಯವಾಗಿ  ಪಾಲ್ಗೊಳಬಹುದು.
ನಮ್ಮ ಸಂಪಾದನೆಯ ಒಂದಂಶವನ್ನು ಗೋಮಾತೆಯ ಸೇವೆಗೆ ನೀಡಬಹುದು.
ರಜಾದಿನಗಳಲ್ಲಿ ಮನೆಮಂದಿಯನ್ನು ಗೋಶಾಲೆಗೆ ಕರೆತಂದು ಅವರಲ್ಲೂ ಗೋವಿನ ಬಗ್ಗೆ ಭಕ್ತಿ ಮೂಡುವಂತೆ ಮಾಡುವುದು.
ಒಟ್ಟಾರೆಯಾಗಿ ಗೋಸಂರಕ್ಷಣೆ ಕೈಜೋಡಿಸುವುದು ಇಂದಿನ ಅತ್ಯಗತ್ಯ ಯಾಕೆಂದರೆ ಗೋವು ಉಳಿದರೆ ಮಾತ್ರ ನಾವು ನೀವೂ ಉಳಿಯಲು ಸಾಧ್ಯ ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗೋವುಗಳನ್ನು ಮೃಗಾಲಯದಲ್ಲಿ ನೋಡುವ ದಿನಗಳು ನಮ್ಮ ಕಣ್ಣಮುಂದಿದೆ. ಎಲ್ಲರ ಬದುಕನ್ನು ಹಸನಾಗಿಸುವುದೇ “ಗೋವನಿತಾಶ್ರಯ ಟ್ರಸ್ಟ್” ನ  ಉದ್ದೇಶ.
ಅದು ನಾವಿರಬಹುದು, ಗೋವಿರಬಹುದು ಅಥವಾ ಇನ್ನು ಏನೇ ಇರಬಹುದು, ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಅತ್ಯಾಸೆಯಿಂದ ಒಂದು ಮತ್ತೊಂದರ ಅನ್ನ ಕಸಿಯುವ, ಜೀವ ಹಿಂಡುವ ವಿಕೃತಿಗೆ ಆಸ್ಪದ ಕೊಡಬಾರದು ಎಂಬ ಸಂದೇಶವನ್ನು ಹೊತ್ತು ಈ ಸಂಸ್ಥೆ  ಮುನ್ನಡೆಯಲಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಮಂಗಳ ಕಾರ್ಯಕ್ಕೆ ಕೈ ಜೋಡಿಸಿ.

Comments are closed.