ಗೋವಿನ ಮಹತ್ವ

ಗೋವು ಮನುಕುಲದ ಆರಂಭದಿಂದಲೂ, ಮನುಷ್ಯರ ಪ್ರೀತಿಪಾತ್ರವಾದ ಪ್ರಾಣಿಯಾಗಿತ್ತು. ಆರ್ಯರು, ಭಾರತೀಯರ ನಾಗರಿಕ ಪರಂಪರೆಯಲ್ಲಿ ಗೋವಿನ ಬಳಕೆಯ ಮಹತ್ವ ಗೋಚರವಾಗುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು.
ಮನುಷ್ಯರಿಗೆ ಅಮೃತಸದೃಶವಾದ ಹಾಲನ್ನು ನೀಡುವ ಕಾಮಧೇನುವಿಗೆ ಜನ್ಮಕೊಟ್ಟ ತಾಯಿಯ ಸ್ಥಾನವನ್ನು ನೀಡಿದ ಹಿರಿಮೆ, ನಮ್ಮ ಪರಂಪರೆ. ಹಾಗಾಗಿ ಭಾರತೀಯ ಆಹಾರ ಸಂಸ್ಕೃತಿ ಯಲ್ಲಿ ಹಾಲು, ಹಾಲಿನ ಉತ್ಪನ್ನಗಳಿಂದ ತಯಾರಿಸಿದ ಖಾದ್ಯಗಳಿಗೆ ವಿಶೇಷ ಸ್ಥಾನಮಾನವಿದೆ.
ದನದ ಸೆಗಣಿ ಕೃಷಿ ಭೂಮಿಗೆ ಅತ್ಯುತ್ತಮ ಗೊಬ್ಬರ. ಕೈಗಾರೀಕರಣಕ್ಕಿಂತ ಮೊದಲು, ಕೃಷಿಗೆ ಮೂಲಭೂತವಾದ ಗೊಬ್ಬರವನ್ನಾಗಿ ದನದ ಸೆಗಣಿಯನ್ನು ಭಾರತದ ಕೃಷಿಕರು ಬಳಸುತ್ತಿದ್ದರು. ಹಾಗಾಗಿ ಆರೋಗ್ಯಕರವಾದ ಆಹಾರ ಬೆಳೆಗಳನ್ನು ಬೆಳೆಯುತ್ತಿದ್ದರು. ಆಧುನಿಕ ಭಾರತದಲ್ಲಿ ಸಾವಯವ ಕೃಷಿ ಪದ್ಧತಿಯ ಮುಖ್ಯ ಭೂಮಿಕೆಯಾಗಿ ಗೋಮೂತ್ರ-ಗೋಮಯಗಳಿಗೆ ವಿಶೇಷ ಸ್ಥಾನ ದೊರಕುತ್ತಿದೆ.
ಗೋಮೂತ್ರಕ್ಕೆ ಔಷಧೀಯ ಹಾಗೂ ಕ್ರಮಿನಾಶಕ ಶಕ್ತಿಯಿದೆ. ಭಾರತೀಯ ವೈದ್ಯಪರಂಪರೆಯಾದ ಆರ್ಯುವೇದ ಪದ್ಧತಿಯಲ್ಲಿ ಗೋಮೂತ್ರ ಬಳಕೆ ಮಹತ್ವದ್ದಾಗಿದೆ. ಕಹಿಬೇವು ಹಾಗೂ ಸೀಗೆಯೊಂದಿಗೆ ಬೆರೆಸಿದ ಗೋಮೂತ್ರವು ಕೃಷಿಭೂಮಿಗೆ ಜೀವಜಲವಾಗಿ, ಭೂತಾಯಿಯ ಮಣ್ಣನ್ನು ಫಲವತ್ತಾಗಿ ಮಾರ್ಪಡಿಸುತ್ತದೆ.
ಸಮೃದ್ಧತೆ ಭಾರತೀಯ ಕೃಷಿ ಪರಂಪರೆಯ ವಿಶೇಷತೆ. ನಮ್ಮಲ್ಲಿ ಬೆಳೆಯದ ಕೃಷಿ ಉತ್ಪನ್ನಗಳಿಲ್ಲ. ನಮ್ಮ ಈ ಪುಣ್ಯಭೂಮಿಯಲ್ಲಿ ಎಲ್ಲಾ ವಿಧದ ದವಸ-ಧಾನ್ಯಗಳು, ದ್ವಿದಳ-ಧಾನ್ಯಗಳು, ಹಣ್ಣು-ತರಕಾರಿಗಳು, ಫಲ-ಪುಷ್ಪಗಳು, ಹತ್ತು, ರೇಷ್ಮೆ, ಹೀಗೆ ದೇಶದ 70 ಶೇಕಾಡಕ್ಕಿಂತಲೂ ಹೆಚ್ಚಿನ ಜನರು ಕೃಷಿಯನ್ನೇ ಜೀವನವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಅಗಾಧ ಪರಂಪರೆಯ ಮಹತ್ವದ ಮೈಲುಗಲ್ಲುಗಳಾಗಿ ಗೋಸಂತತಿ ಕೃಷಿಕರ ಒಡನಾಡಿಯಾಗಿವೆ. ಉಳಲು, ಗಾಡಿ ಎಳೆಯಲು, ನೀರಾವರಿಗೆ, ಗೊಬ್ಬರವಾಗಿ, ಕೀಟನಾಶಕವಾಗಿ ಗೋವುಗಳು ಸಮೃದ್ಧ ಕೃಷಿಯ ಸಕ್ರೀಯ ಪಾಲುದಾರರಾಗಿವೆ.
ಕೃಷಿಪರಂಪರೆಯಲ್ಲಿ ಗೋಸಂತತಿ ಪಾತ್ರ
ಸಣ್ಣ ಹಿಡುವಳಿದಾರರನ್ನು ಹೊಂದಿರುವ ಭಾರತದಲ್ಲಿ ಕೃಷಿಕರಿಗೆ ಗೋಸಂತತಿಯಷ್ಟು ಉಪಕಾರಿಯಾಗುವಂತಹ ಇನ್ನಾವುದೇ ಪರ್ಯಾಯ ವ್ಯವಸ್ಥೆ ಇಲ್ಲ.
ಉಳುವೆಯ ಎತ್ತುಗಳ ಗೊರಸು, ನೇಗಿಲು, ಟ್ರ್ಯಾಕ್ಟರ್ ಮಾಡುವ ಹಾಗೆ, ಭೂಮಿಗೆ ಯಾವುದೇ ರೀತಿಯ ಹಾನಿ ಮಾಡುವದಿಲ್ಲ. ಉಳುವೆಯ ಹೊತ್ತಿನಲ್ಲಿ ಅವು ವಿಸರ್ಜಿಸುವ ಗೋಮೂತ್ರ-ಗೋಮಯಗಳು ಭೂಮಿಯ ಸಾವಯವ ಗೊಬ್ಬರ ಹಾಗೂ ಕೀಟನಾಶಕವಾಗಿ ಉಪಯುಕ್ತವಾಗುತ್ತವೆ.
ಪರಿಸರ ಜನ್ಯ ದನದ ಸೆಗಣಿ ಅತ್ಯುತ್ತಮ ಸಾವಯವ ಗೊಬ್ಬರವಾಗಿ, ಒಣಗಿದ ಎಲೆ, ಎರೆಹುಳು ಹಾಗೂ ಸ್ಲರಿ ಗೊಬ್ಬರಗಳ ರೂಪದಲ್ಲಿ ಭೂಮಿಯ ಫಲವತ್ತತೆಯನ್ನು ದ್ವಿಗುಣಗೊಳಿಸುತ್ತವೆ. ಇದು ರಾಸಾಯನಿಕ ತ್ಯಾಜ್ಯವನ್ನು ಉತ್ಪಾದಿಸುವುದು ಕೂಡ ಇಲ್ಲ
99 ಶೇಕಡಾ ಕೀಟಗಳು ಪರಿಸರ ವ್ಯವಸ್ಥೆಗೆ ಉಪಕಾರಿಗಳು. ಗೋಮೂತ್ರ-ಗೋ ಉತ್ಪನ್ನಗಳಾದ ಮಜ್ಜಿಗೆಗಳಿಂದ ತಯಾರಿಸಿದ ಕೀಟನಾಶಕಗಳು ಇಂತಹ ಉಪಕಾರಿ ಕೀಟಗಳನ್ನು ಕೊಲ್ಲುವುದಿಲ್ಲ.

ಒಂದು ದನದ ಸೆಗಣಿ 5 ಎಕರೆ ಭೂಮಿಯ ಫಲವತ್ತತೆಯನ್ನು ವೃದ್ಧಿಸಬಲ್ಲದು. ಹಾಗೇಯೇ ಒಂದು ದನದ ಮೂತ್ರ 10 ಎಕರೆ ಭೂಮಿಯ ಕೀಟಗಳನ್ನು ನಿಯಂತ್ರಿಸಬಲ್ಲದು. ದೇಶದ ಸರ್ವೋಚ್ಚ ನ್ಯಾಯಾಲಯವೇ ತಿಳಿಸಿರುವಂತೆ, ಒಂದು ಎತ್ತಿನ ಸೆಗಣಿ 4 ಜನರ ಕುಟುಂಬವನ್ನು ಪೋಷಿಸಬಲ್ಲದು.
ಗೋಮೂತ್ರ-ಗೋಮಯಗಳಿಂದ ತಯಾರಿಸಿದ ಗೊಬ್ಬರ, ಬೆಳೆಯ ಸಮೃದ್ಧಿ ಹಾಗೂ ಗುಣಮಟ್ಟಕ್ಕೆ ಪೂರಕವಾಗುತ್ತದೆ. ರಾಸಾಯನಿಕ ಗೊಬ್ಬರಗಳಿಗೆ ಹೋಲಿಸಿದ್ದಲ್ಲಿ, ದನದ ಸೆಗಣಿಯಿಂದ ತಯಾರಿಸಿದ ಗೊಬ್ಬರ 5 ಪಟ್ಟು ನೀರನ್ನು ಉಳಿಸುತ್ತದೆ.

Comments are closed.